ಕೀರಫ್

ಸೋವಿಯತ್ ಒಕ್ಕೂಟದ ರಷ್ಯನ್ ಸೋವಿಯತ್ ಸಂಯುಕ್ತ ಗಣರಾಜ್ಯದ ಆಬ್ಲಾಸ್ಟ್ (ಆಡಳಿತ ವಿಭಾಗ) ಮತ್ತು ಆ ವಿಭಾಗದ ಮುಖ್ಯಪಟ್ಟಣ. ಐರೋಪ್ಯ ರಷ್ಯದ ಈಶಾನ್ಯದಲ್ಲಿ, ವ್ಯಟ್ಕ ನದೀಪ್ರದೇಶವನ್ನೆಲ್ಲ ಹೆಚ್ಚು ಕಡಿಮೆ ಆವರಿಸಿಕೊಂಡಿರುವ ಕೀರಫ್ ಆಬ್ಲಾಸ್ಟಿನ ವಿಸ್ತೀರ್ಣ 47,602 ಚ.ಮೈ. ನದಿಯಲ್ಲಿ ಹರಿದು ಬಂದ ನೀರ್ಗಲ್ಲ ಪ್ರವಾಹದೊಂದಿಗೆ ಬಂದು ಹರಡಿದ ಮುರುಕಲುಗುಪ್ಪೆಯಿಂದಾದ ನೆಲದಿಂದ ಕೂಡಿದ ಕೀರಫ್ ಮೈದಾನದ ಎತ್ತರದ ಭಾಗ ಸುಣ್ಣಕಲ್ಲಿನಿಂದ ಕೂಡಿದ್ದು ನಡುನಡುವೆ ನದಿಗಳ ಆಳವಾದ ಕೊರೆತಕ್ಕೆ ಈಡಾಗಿದೆ. ಬಹುತೇಕ ಇಡೀ ಪ್ರದೇಶದಲ್ಲಿ ಟೈಗ ಕಾಡುಗಳುಂಟು. ಇಲ್ಲಿ ಪೈನ್, ಫರ್, ಸ್ಟ್ರೂಸ್ ಮತ್ತು ಬರ್ಚ್ ಬೆಳೆಯುತ್ತವೆ. ಅತ್ಯಂತ ದಕ್ಷಿಣದಲ್ಲಿ ಪರ್ಣಪಾತಿ ವೃಕ್ಷಗಳುಂಟು. ಇಲ್ಲಿ ಓಕ್ ಸಾಮಾನ್ಯ. ಅಲ್ಲಲ್ಲಿ ವಿಶಾಲವಾದ ಸಸ್ಯಾಂಗಾರಪೂರಿತ ನೆಲವೂ ಜವುಗು ಭೂಮಿಯೂ ಇವೆ. ತಗ್ಗು ನೆಲಗಳಲ್ಲಿ ಹುಲ್ಲುಗಾವಲುಗಳಿವೆ. ಇಲ್ಲಿಯ ಮಣ್ಣು ಬೀಳಿಬೂದು ಬಣ್ಣವುಳ್ಳದ್ದು. ಇಲ್ಲಿಯದು ಖಂಡಾಂತರ ವಾಯುಗುಣ. ಜನವರಿಯ ಉಷ್ಣತೆ: - 16ಲಿ ಸೆಂ. (4ಲಿ ಫ್ಯಾ.) ಜುಲೈ ತಿಂಗಳಿನದು 17ಲಿಸೆಂ. (63ಲಿ ಫ್ಯಾ.) ವಾರ್ಷಿಕ ಮಳೆ 20"-24". ಅರಣ್ಯಾಧಾರಿತ ಕಸಬುಗಳು ಹಿಂದಿನಿಂದಲೂ ಪ್ರಮುಖವಾಗಿವೆ. ಅಣೆಕಟ್ಟು, ಬೊಂಬೆ ಮತ್ತು ಕಲಾಬತು ಕೆಲಸಗಳ ಬದಲು ಈಗ ಮರದ ತಿರುಳು. ವೆನೀರ್ ವನಸ್ಪತಿ ರಸಾಯನ, ಮರಕೊಯ್ತ-ಮುಂತಾದ ಉದ್ಯಮಗಳು ಬೆಳೆದಿವೆ. ಕೃಷಿ ಅಷ್ಟೇನೂ ಮುಖ್ಯವಲ್ಲ. ರೈ, ಓಟ್ಸ್, ಬಕ್‍ವ್ಹೀಟ್ ಮತ್ತು ಆಲೂಗೆಡ್ಡೆ ಇಲ್ಲಿಯ ಬೆಳೆಗಳು. ಹಂದಿಗಳನ್ನೂ ದನಕರುಗಳನ್ನೂ ಸಾಕುತ್ತಾರೆ. ಕೀರಫ್ ನ ಜನಸಂಖ್ಯೆ 19,13,600. ಇವರಲ್ಲಿ ಸೇ. 37 ರಷ್ಟು (7,04,212) ಜನ ಪಟ್ಟಣವಾಸಿಗಳು. ಕೀರಫ್ ಆಬ್ಲಾಸ್ಟಿನಲ್ಲಿ 16 ಪಟ್ಟಣಗಳೂ 29 ಪಟ್ಟಣಜಿಲ್ಲೆಗಳೂ ಇವೆ. ಕೀರಫ್ ನಗರವಲ್ಲದೆ ಸ್ಲೊಬೋಡ್ಸ್‍ಕಿ ಮತ್ತು ಕೋಟೆಲ್ ನಿಚ್ ದೊಡ್ದ  ನಗರಗಳು.

 ಕೀರಫ್ ನಗರಕ್ಕೆ ಹಿಂದೆ ವ್ಯಟ್ಕ ಎಂಬ ಹೆಸರಿತ್ತು. ಇದು   ವ್ಯಟ್ಕ ನದಿಯ ಬಲದಂಡೆಯ ಮೇಲಿದೆ. ಇಲ್ಲಿಂದ  ಮಾಸ್ಕೋಗೆ 480 ಮೈ. ಜನಸಂಖ್ಯೆ 2,53,416 (1959). 1181 ರಲ್ಲಿ ನಾವ್ ಗರಾಡಿನ ವರ್ತಕರು ಈ ನಗರವನ್ನು ನಾಫ್ ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ಇದು ವ್ಯಟ್ಕ ಪ್ರದೇಶದ ಕೇಂದ್ರವಾಯಿತು. 14-15 ನೆಯ ಶತಮಾನಗಳಲ್ಲಿ ರಷ್ಯನರು ಇಲ್ಲಿ ನೆಲೆಸಿದರು. 1489ರಲ್ಲಿ ಮಾಸ್ಕೋ ಇದನ್ನು ವಶಪಡಿಸಿಕೊಂಡಿತು. ವ್ಯಟ್ಕ ಎಂಬ ಹೆಸರು ಇದಕ್ಕೆ ಬಂದದ್ದು 1780ರಲ್ಲಿ. ಮುಖ್ಯ ಮಾರ್ಗಗಳಿಗೆ ದೂರದಲ್ಲಿದ್ದುದರಿಂದ ಇದರ ಬೆಳೆವಣಿಗೆ ನಿಧಾನವಾಗಿತ್ತು. ದೇಶಾಂತರ ಶಿಕ್ಷೆಗೆ ಒಳಗಾದವರನ್ನು ಇಲ್ಲಿಗೆ ಕಳುಹಿಸಲಾಗುತ್ತಿತ್ತು. 1906ರಲ್ಲಿ ಕೂಡ ಇಲ್ಲಿಂದ ಮಾಸ್ಕೋಗೆ ನೇರ ರೈಲ್ವೆ ಸಂಪರ್ಕ ಇರಲಿಲ್ಲ. ಈಗ ಇಲ್ಲಿಂದ ಬೇರೆಡೆಗಳಿಗೆ ರೈಲು ಮಾರ್ಗಗಳ ನಿರ್ಮಾಣವಾಗಿದೆ.  ಹಳೆಯ ಕುಶಲ ಕಸಬುಗಳ ಬದಲು ಆಧುನಿಕ ಸಹಕಾರ ಕೈಗಾರಿಕೆಗಳು ಸ್ಥಾಪಿತವಾಗಿವೆ. ಕ್ರೋಮಿಯಂ ಮತ್ತು ಕಬ್ಬಿಣೇತರ ಲೋಹ ಕೈಗಾರಿಕೆಗಳು ಯಂತ್ರ ತಯಾರಿಕೆ, ಮಾಪನೋಪಕರಣಗಳು, ಕೃಷಿ ಉಪಕರಣಗಳು. ಮರಗೆಲಸ, ಬೆಂಕಿಕಡ್ಡಿ, ಪಾದರಕ್ಷೆ ಮತ್ತು ಕೃತಕ ಚರ್ಮ ಕೈಗಾರಿಕೆಗಳು ಬೆಳೆದಿವೆ.

 ರಷ್ಯನ್ ಕ್ರಾಂತಿಕಾರ ಅಲೆಕ್ಸಾಂಡರ್ ಇವಾನೊವಿಚ್ ಹರ್ಟ್‍ಸೆನ್ (1812-1870) ದೇಶಭ್ರಷ್ಟನಾಗಿ ಕೀರಫ್‍ನಲ್ಲಿದ್ದಾಗ ಶಿಕ್ಷಕ ಶಿಕ್ಷಣ ಸಂಸ್ಥೆ ಮತ್ತು ಕೃಷಿ ಸಂಸ್ಥೆಗಳನ್ನು ಸ್ಥಾಪಿಸಿದೆ. ಬಾಲ್ಷೆವಿಕ್ ನಾಯಕ ಎಸ್. ಎಂ. ಕೀರಫನ ಹೆಸರನ್ನು ಈ ನಗರಕ್ಕೆ ಇಡಲಾದ್ದು 1934ರಲ್ಲಿ. ಕೀರಫ್ ಒಂದು ಮುಖ್ಯ ರೈಲ್ವೆ ಸಂದಿಸ್ಥಳ.

(ಕೆ.ಎನ್.ಸಿ.)

 